ಪ್ರೆವೊ, ಪಿಯರೆ
1751-1839. ಸ್ವಿಟ್ಸರ್ಲೆಂಡಿನ ಭೌತವಿಜ್ಞಾನಿ. 1751 ಮಾರ್ಚ್ 3 ರಂದು ಜನನ. 1839 ಏಪ್ರಿಲ್ 8ರಂದು ನಿಧನ. ಈತ ಮಂಡಿಸಿದ ಶಾಖವಿನಿಮಯ ಸಿದ್ಧಾಂತ ಆಗ ಪ್ರಚಲಿತವಾಗಿದ್ದ ಉಷ್ಣದ ದ್ವಿತರಲ ಸಿದ್ಧಾಂತವನ್ನು (ಟೂ ಫ್ಲೂಯಿಡ್ ತೀಯರಿ ಆಫ್ ಹೀಟ್) ಅಳಿಸಿ ಹಾಕಿತು. ಈ ಸಿದ್ಧಾಂತದ ಪ್ರಕಾರ ಯಾವುದೇ ಕಾಯದ ಒಳಕ್ಕೆ ಉಷ್ಣ ತರಲ ಹೊಕ್ಕಾಗ ಉಷ್ಣತೆ ತಗ್ಗುತ್ತದೆ. ತರಲಗಳು ಅದೃಶ್ಯ. ಪ್ರೆವೊನ ಪ್ರಕಾರ ನೇರ ಅಳತೆಗೆ ದೊರೆಯುವ ಶೀತತರಲವೆಂಬುದು ಇಲ್ಲವೇ ಇಲ್ಲ; ಕಾಯದ ಉಷ್ಣತೆ ಹೆಚ್ಚುವುದು ಉಷ್ಣ ತರಲ ಅದರ ಒಳಹೊಕ್ಕಾಗ, ಮತ್ತು ಇಳಿಯುವುದು ಇದು ಅದರಿಂದ ಸೋರಿಹೋದಾಗ ಎಂದಿದೆ. ಪ್ರೆವೊ ಇನ್ನೂ ಮುಂದೆ ಹೋಗಿ ಎಲ್ಲ ಕಾಯಗಳೂ ಎಲ್ಲ ಉಷ್ಣತೆಗಳಲ್ಲೂ ಉಷ್ಣವನ್ನು ಹೊರ ಸೂಸುತ್ತ ಮತ್ತು ಹೀರಿಕೊಳ್ಳುತ್ತ ಇರುತ್ತವೆ ಎಂದು ವಾದಿಸಿದ. ಒಂದು ಕಾಯದ ಉಷ್ಣತ ಹೆಚ್ಚಾದರೆ ಅದು ಹೀರಿಕೊಳ್ಳುವ ಉಷ್ಣ ಹೊರಸೂಸುವ ಉಷ್ಣಕ್ಕಿಂತ ಹೆಚ್ಚು ಅಷ್ಟೆ. ಉಷ್ಣದ ವಿನಿಮಯಕ್ಕೆ ಪ್ರೆವೊನ ವಿನಿಮಯ ಸಿದ್ಧಾಂತ ಎಂದು ಹೆಸರು.
(ಎಸ್.ಎ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ